ಗ್ರಾಮ್ ಸಮಾನತೂಕ
	ಶುದ್ಧ ಪದಾರ್ಥ ಒಂದರ ಸಮಾನ ತೂಕ ಎಷ್ಟೋ, ಅಷ್ಟು ಗ್ರಾಮ್ ಆ ಪದಾರ್ಥ (ಗ್ರಾಮ್ ಈಕ್ವಿವಲೆಂಟ್ ವೇಟ್).  ಧಾತುಗಳೇ ಆಗಲಿ, ಸಂಯುಕ್ತಗಳೇ ಆಗಲಿ, ಅವು ರಾಸಾಯನಿಕ ಕ್ರಿಯೆಗಳಲ್ಲಿ ಭಾಗವಹಿಸುವಾಗ ನಿರ್ದಿಷ್ಟ ತೂಕ ಪ್ರಮಾಣಗಳಲ್ಲಿ ಭಾಗವಹಿಸುತ್ತವೆ.  ಉದಾಹರಣೆಗೆ 9 ತೂಕ ಅಲ್ಯೂಮಿನಿಯಮ್ ಸೂಕ್ತ ಆಮ್ಲದಲ್ಲಿ ಕರಗಿದಾಗ 1,008 ತೂಕ ಹೈಡ್ರೊಜನನ್ನು ಪಲ್ಲಟಿಸುತ್ತದೆ.  ಅದೇ 9 ತೂಕ ಅಲ್ಯೂಮಿನಿಯಮ್ 8 ತೂಕ ಆಕ್ಸಿಜನಿನೊಂದಿಗೆ ಸಂಯೋಗ ಹೊಂದುತ್ತದೆ.  ಹೈಡ್ರೊಜನ್ ಆಕ್ಸಿಜನುಗಳ ಸಂಯೋಗದಿಂದ ನೀರು ಉತ್ಪತ್ತಿಯಾಗುವಾಗಲೂ ಇದೇ 1.008 : 8.00 ಪ್ರಮಾಣದಲ್ಲಿ ಅವು ಸಂಯೋಗ ಹೊಂದುವುವೆಂಬುದನ್ನು ಗಮನಿಸಬಹುದು.  ಈ ತೂಕ ಪ್ರಮಾಣಗಳನ್ನು ನಿರ್ಧರಿಸಲು 8 ತೂಕ ಆಕ್ಸಿಜನನ್ನು ಪ್ರಮಾಣಕವಾಗಿ ಇಟ್ಟುಕೊಂಡು ಇತರ ಧಾತುಗಳ ತೂಕಗಳನ್ನು ನಿರ್ಣಯಿಸುತ್ತಾರೆ.  ಇದೇ ಧಾತುಗಳ ಸಮಾನ ತೂಕಗಳು.  ಇದೇ ರೀತಿ ಸಂಯುಕ್ತಗಳ ಸಮಾನ ತೂಕಗಳನ್ನೂ ನಿರ್ಧರಿಸುತ್ತಾರೆ. ಕೆಲವು ವೇಳೆ ಒಂದೇ ಧಾತುವಿಗೆ ಬೇರೆ ಬೇರೆ ವೇಲೆನ್ಸಿ ಇರುವುದರಿಂದ, ಸಂಯುಕ್ತಗಳು ಕ್ರಿಯೆಗಳಲ್ಲಿ ಬೇರೆ ಬೇರೆ ಪಾತ್ರ ವಹಿಸುವ ಸಾಧ್ಯತೆ ಇರುವುದರಿಂದ (ಒಂದೇ ಸಂಯುಕ್ತ ಒಂದು ಕ್ರಿಯೆಯಲ್ಲಿ ಆಮ್ಲವಾಗಿ ಭಾಗವಹಿಸಬಹುದು, ಇನ್ನೊಂದರಲ್ಲಿ ಉತ್ಕರ್ಷಣಕಾರಿಯಾಗಿ ಭಾಗವಹಿಸಬಹುದು) ಸಂದರ್ಭಾನುಸಾರ ಒಂದೇ ಪದಾರ್ಥದ ಸಮಾನ ತೂಕ ವ್ಯತ್ಯಾಸವಾಗುತ್ತ ಹೋಗಬಹುದು.  ಆದ್ದರಿಂದ ಸಮಾನ ತೂಕದ ಬಗ್ಗೆ ಮಾತನಾಡುವಾಗ ಸಂದರ್ಭವನ್ನು ಸೂಚಿಸುವುದು ಅಗತ್ಯ.

	ಈ ಸಮಾನ ತೂಕಗಳು  ಕೇವಲ ಸಂಖ್ಯೆಗಳು.  ರಾಸಾಯನಿಕ ಕ್ರಿಯೆಗಳಲ್ಲಿ ಪದಾರ್ಥಗಳು ಭಾಗವಹಿಸುವಾಗ ಅವುಗಳ ಸಮಾನ ತೂಕಗಳ ಪ್ರಮಾಣಗಳಲ್ಲಿ ಭಾಗವಹಿಸುವುವು ಎಂದಾಗ ಗ್ರಾಮುಗಳಲ್ಲಿ ಬೇಕಾದರೂ ತೆಗೆದುಕೊಳ್ಳಬಹುದು.  ಪೌಂಡುಗಳಲ್ಲಿ ಬೇಕಾದರೂ ತೆಗೆದುಕೊಳ್ಳಬಹುದು.  ಇನ್ನಾವುದೇ ಮಾನಗಳಲ್ಲಿ ಬೇಕಾದರೂ ತೆಗೆದುಕೊಳ್ಳಬಹುದು. ಸಮಾನ ತೂಕ ಎಷ್ಟೋ ಅಷ್ಟು ಗ್ರಾಮ್ ಪದಾರ್ಥವನ್ನು ತೆಗೆದುಕೊಂಡಾಗ ಅದನ್ನು ಗ್ರಾಮ್ ಸಮಾನ ತೂಕ ಎಂದು ಕರೆಯುವುದು ರೂಢಿ.
(ಜೆ.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ